1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಸ್ಟೆಪ್ ಯೋಜನೆ:

ಮಹಿಳೆಯರಿಗಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಲಿತ ಯೋಜನೆಯನ್ನು(ಸ್ಟೆಪ್) ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ 1986ರಲ್ಲ್ಲಿ ಪ್ರಾರಂಭವಾಗಿರುತ್ತದೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿಪಡಿಸುವುದು  ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಅಲ್ಲದೇ ಮಹಿಳೆಯರಲ್ಲಿ ವೃತ್ತಿ ಕೌಶಲ್ಯತೆ ಅಭಿವೃದ್ಧಿ ಪಡಿಸುವ ತರಬೇತಿಗಳನ್ನು ಹಾಗೂ ನಿರಂತರ ಆದಾಯ ತರುವಂತಹ ಉದ್ಯೋಗಗಳನ್ನು ಕಲ್ಪಿಸಿ ಹೆಚ್ಚಿನ ಮಹಿಳೆಯರನ್ನು ಉದ್ಯೋಗಗಳಲ್ಲಿ ತೊಡಗಿಸುವ ಉದ್ದೇಶ ಹೊಂದಿದೆ.

ಸ್ಪೆಪ್ ಯೋಜನೆಯು ಮಹಿಳೆಯರನ್ನು ಸ್ವಸಹಾಯ ಗುಂಪುಗಳಲ್ಲಿ ಸಂಘಟಿಸಿ ಅವರ ವೃತ್ತಿ ಕೌಶಲ್ಯತೆಯನ್ನು ಅಭಿವೃದ್ಧಿಪಡಿಸಿ ಉತ್ಪಾದಕ ಆಸ್ತಿಗಳಿಗೆ ವ್ಯವಸ್ಥೆ ಮಾಡುವುದು, ಹಿಂದಿನ ಮತ್ತು ಮುಂದಿನ ಕೊಂಡಿಗಳನ್ನು(Backward and Forward Linkages) ಸೃಷ್ಟಿಸುವುದು, ಬೆಂಬಲ ಸೇವೆಗಳನ್ನು ಸುಧಾರಿಸುವುದು/ ವ್ಯವಸ್ಥೆ ಮಾಡುವುದು, ಆಸ್ತಿ ಸೃಷ್ಟಿಗಾಗಿ ಸಾಲಕ್ಕೆ ಅವಕಾಶ ಮಾಡಿಕೊಡುವುದು, ಲಿಂಗ ಸಮಾನತೆ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಹಾಗೂ ಕಾನೂನು ಸಾಕ್ಷರತೆ ಬಗ್ಗೆ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವುದು, ಮಹಿಳೆಯರಿಗೆ ನಿರಂತರ ಆದಾಯ ತರುವಂತಹ ಉದ್ಯೋಗವನ್ನು ನೀಡುವ ಮೂಲಕ ಗಮನಾರ್ಹ ಪ್ರಭಾವವನ್ನು ಬೀರುವ ಗುರಿಯನ್ನು ಹೊಂದಿದೆ. ಹೀಗೆ, ಸ್ಟೆಪ್ ಕಾರ್ಯಕ್ರಮವು ಸಾಂಪ್ರದಾಯಿಕ ವಲಯಗಳಲ್ಲಿ ಬಡ ಮಹಿಳೆಯರ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿರುವ ಪ್ಯಾಕೇಜನ್ನು ನೀಡುತ್ತದೆ. ಈ ಯೋಜನೆಯ ಮುಖ್ಯವಾದ ಗುರಿಯೆಂದರೆ ಯೋಜನಾ ಅವಧಿಯು ಮುಕ್ತಾಯಗೊಂಡ ನಂತರವೂ ಕನಿಷ್ಠ ಸರ್ಕಾರಿ ನೆರವು ಹಾಗೂ ಮಾರ್ಗದರ್ಶನದೊಂದಿಗೆ ಮಾರುಕಟ್ಟೆ ಪ್ರದೇಶದಲ್ಲಿ ಸ್ವಾವಲಂಬಿಯಾಗಿ ಉಳಿಯುವ (Self Sustaining) ಆಧಾರದ ಮೇಲೆ ಗುಂಪುಗಳನ್ನು ಅಭಿವೃದ್ಧಿ ಪಡಿಸುವುದಾಗಿದೆ.

  • ಉದ್ಯೋಗ ಹಾಗೂ ಆದಾಯ ಹೆಚ್ಚಿಸುವ ಸಲುವಾಗಿ – ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರನ್ನು ಸಂಘಟಿಸಿ, ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ರಚಿಸುವುದು.
  • ಹೈನುಗಾರಿಕೆ ಜೊತೆಗೆ ವೃತ್ತಿಯಲ್ಲಿ ಕೌಶಲ್ಯತೆ ಹಾಗೂ ನೈಪುಣ್ಯತೆ ಪಡೆಯಲು ಅವಶ್ಯಕತೆಗೆ ಅನುಗುಣವಾಗಿ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡುವುದು.
  • ಆದಾಯ ತರುವಂತಹ ಚಟುವಟಿಕೆಗಳನ್ನು ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚಿಸಿ, ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಲು ಅವಕಾಶ ಕಲ್ಪಿಸುವುದು.
  • ಹಣಕಾಸಿನ ನೆರವು ಪಡೆಯಲು ಹಾಗೂ ಪಡೆದ ಸವಲತ್ತಿಗೆ ಪೂರಕವಾದ ಸೇವೆ ಮತ್ತು ತರಬೇತಿಗಳನ್ನು ಕೊಡಿಸುವುದು ಮತ್ತು ಉತ್ಪಾದಿಸಿದ ವಸ್ತುಗಳಿಗೆ ನಿರಂತರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಮೂಲಕ ಮಹಿಳಾ ಅಭಿವೃದ್ದಿಯನ್ನು ಸಾಧಿಸುವುದು.
  • ಕಾನೂನು ಅರಿವು, ಪೌಷ್ಠಕ ಆಹಾರ, ಆರೋಗ್ಯಪಾಲನೆ ಮತ್ತು ಲಿಂಗ ಸಮಾನತೆಯ  ಬಗ್ಗೆ ಅರಿವು ಮೂಡಿಸುವಂತಹ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
  • ಮಹಿಳೆಯರನ್ನು ಹೈನುಗಾರಿಕೆಯಲ್ಲಿ ತೂಡಗಿಸಿ ಅವರ ಆದಾಯ ವೃಧಿಯಾಗಲು ಅಂಚಿನ ಹಣದ ಮೂಲಕ ಹೈನುರಾಸು ಕೂಡಿಸುವುದು ಮತ್ತು ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸಿ ಆತ್ಮವಿಶ್ವಾಸ ಮೂಡಿಸುವುದು.

ಕರ್ನಾಟಕ ಹಾಲು ಮಹಾಮಂಡಳಿಯು (ಕಹಾಮ) ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪುರಸ್ಕೃತ ಮಹಿಳೆಯರ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಿಲಿತ (ಸ್ಟೆಪ್) ಯೋಜನೆಯನ್ನು 1997ನೇ ಅಕ್ಟೋಬರ್‍ನಿಂದ ಈವರೆಗೆ ಕರ್ನಾಟಕದಲ್ಲಿ ಅನುಷ್ಠಾನಗೊಳಿಸುತ್ತಾ ಬಂದಿರುತ್ತದೆ. 800 ಮಹಿಳಾ ಸಹಕಾರಿ ಹಾಲು ಉತ್ಪಾದಕರ ಸಂಘಗಳನ್ನು ಮೂರು ಹಂತಗಳಲ್ಲಿ ರಚಿಸುವುದರೊಂದಿಗೆ ಈ ಹಿಂದೆ ರಚಿತವಾದ 250 ಮಹಿಳಾ ಸಂಘಗಳನ್ನು ಸ್ಟೆಪ್ ಸಂಘಗಳನ್ನಾಗಿ ನಾಲ್ಕನೇ ಹಂತದಲ್ಲಿ ಪರಿವರ್ತಿಸಲಾಗಿದೆ. ಇದರೊಂದಿಗೆ 2007ರಲ್ಲಿ ಭಾರತ ಸರ್ಕಾರವು ಪುನಃ ಎರಡು ಹಂತಗಳಿಗೆ ಒಪ್ಪಿಗೆ ನೀಡಿ, 5ನೇ ಹಂತದಲ್ಲಿ 200 ನೂತನ ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ಮತ್ತು 6ನೇ ಹಂತದಲ್ಲಿ ಹಾಲಿ ಕಾರ್ಯಾಚರಣೆಯಲ್ಲಿರುವ  200 ಮಹಿಳಾ ಸಂಘಗಳನ್ನು ಸ್ಟೆಪ್ ಯೋಜನೆ ಅಡಿ ತರಲಾಗಿದೆ. ಇದರೊಂದಿಗೆ ಭಾರತ ಸರ್ಕಾರವು ಆಗಸ್ಟ್ 2010ರಲ್ಲಿ ಪುನಃ ಎರಡು ಹಂತಗಳಿಗೆ ಒಪ್ಪಿಗೆ ನೀಡಿದ್ದು, 7ನೇ ಹಂತದಲ್ಲಿ 200 ಮತ್ತು 8ನೇ ಹಂತದಲ್ಲಿ 250 ಮಹಿಳಾ ಸಂಘಗಳನ್ನು ಸ್ಟೆಪ್ ಯೋಜನೆ ಅಳವಡಿಸಲಾಗಿದೆ.

ಇದುವರೆಗೂ ಕಹಾಮದಲ್ಲಿ 3,949 ಹಾಲು ಉತ್ಪಾದಕರ ಮಹಿಳಾ ಸಂಘಗಳನ್ನು ರಚಿಸಲಾಗಿದ್ದು 1924 ಮಹಿಳಾ ಸಹಕಾರಿ ಹಾಲು ಉತ್ಪಾದಕರ ಸಂಘಗಳನ್ನು ಸ್ಟೆಪ್ ಯೋಜನೆಯಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಗುಲ್ಬರ್ಗಾ ಹಾಲು ಒಕ್ಕೂಟಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲೆಯ ನಿಟ್ಟೂರು ಶಿಕ್ಷಣ ಸಂಸ್ಥೆ ಬಾಲ್ಕಿ ಇವರ ಸಹಯೋಗದೊಂದಿಗೆ ಪ್ರಾರಂಭವಾದ ಸ್ಟೆಪ್ ಯೋಜನೆ ಅಡಿಯಲ್ಲಿ 24 ಮಹಿಳಾ ಸಹಕಾರಿ ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಗಿದೆ. ಭಾರತ ಸರ್ಕಾರವು ಒಟ್ಟು ರೂ.56.48 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದ್ದು, ಇದುವರೆಗೂ ರೂ.45.36 ಕೋಟಿ ಬಿಡುಗಡೆ ಮಾಡಿದೆ.

ಪ್ರತಿ ಮಹಿಳಾ ಸಂಘಕ್ಕೆ 2.50 ಲಕ್ಷದಿಂದ 3.00 ಲಕ್ಷ ಅನುದಾನ ದೊರೆಯುತ್ತಿದ್ದು, ಅದನ್ನು ಸಂಘಗಳ ರಚನೆ, ನಿರ್ವಹಣೆ, ತರಬೇತಿ ಕಾರ್ಯಕ್ರಮಗಳು, ಅರಿವು ಕಾರ್ಯಕ್ರಮಗಳು ಹಾಗೂ ಹೈನುರಾಸು ಖರೀದಿಗಾಗಿ ಅಂಚಿನ ಮೊತ್ತ(ಸುತ್ತು ನಿಧಿ) ಬಡ್ಡಿ ರಹಿತ ಸಾಲದ ರೂಪದಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಭಾರತ ಸರ್ಕಾರ ಶೇ.90 ರಷ್ಟು ಅನುದಾನ ನೀಡಿದ್ದು, ಅನುಷ್ಠಾನಗೊಳಿಸುವ ಸಂಸ್ಥೆ ಕಹಾಮ/ ಒಕ್ಕೂಟಗಳು ಶೇ.10 ರಷ್ಟು ವೆಚ್ಚಗಳನ್ನು ಭರಿಸುತ್ತದೆ.

ಬಡತನ ರೇಖೆಗಿಂತ ಕೆಳಗಿರುವ ಸುಮಾರು 1.10ಲಕ್ಷ ಮಹಿಳೆಯರು ಮತ್ತು ಪರಿಶಿಷ್ಠ ಜಾತಿ ಮತ್ತು ವರ್ಗದ ಕುಟುಂಬಗಳು ಸ್ಟೆಪ್ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಇದರಿಂದ 6,500 ಮಹಿಳೆಯರಿಗೆ ಉದ್ಯೋಗ ಅವಕಾಶ ದೊರಕಿಸಲಾಗಿದೆ. ಇದರಲ್ಲಿ 147 ವಿಧವೆಯರು, 29 ವಿಚ್ಛೇದಿತ ಮಹಿಳೆಯರು ಮತ್ತು 22 ವಿಕಲ ಚೇತನ ಮಹಿಳೆಯರು ಸೇರಿರುತ್ತಾರೆ. ಇವರಿಗೆ ಸರಾಸರಿ ವೇತನ ಮಾಹೆಯಾನ ಅಂದಾಜು ರೂ.3,000/- ರಿಂದ ರೂ.4000/-ಗಳನ್ನು ಮಹಿಳಾ ಸಂಘಗಳಿಂದ ನೀಡಲಾಗುತ್ತಿದೆ.

ಕರ್ನಾಟಕ ಹಾಲು ಮಹಾಮಂಡಳಿಯು ತನ್ನ 14 ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಸ್ಟೆಪ್ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಹಾಲು ಒಕ್ಕೂಟಗಳ ಕೋರ್ ಟೀಮ್ ಸದಸ್ಯರು ಬೆಂಚ್ ಮಾರ್ಕ್ ಸಮೀಕ್ಷೆಯ ಮೂಲಕ ಆದ್ಯತಾ ವಲಯದ ಗುಂಪಿನ ಸದಸ್ಯರನ್ನು (BPL Members) ಗುರುತಿಸುತ್ತಾರೆ. ಅದರಲ್ಲಿ ಆಸ್ತಿ ಇಲ್ಲದವರು, ಕೂಲಿ ಕಾರ್ಮಿಕರು, ಹರಿಜನ-ಗಿರಿಜನರು (ಅನುಸೂಚಿತ ಜಾತಿ, ಬುಡಕಟ್ಟು ಜನಾಂಗ) ಮಹಿಳಾ ಮುಖಂಡತ್ವದ ಸಂಸಾರಗಳು(ವಿಧವೆಯರು), ವಲಸೆ ನಿರತ ಕೂಲಿ ಕಾರ್ಮಿಕರು, ಆದಿವಾಸಿಗಳು, ವಿಚ್ಫೇದಿತ ಗ್ರಾಮೀಣ ಮಹಿಳೆಯರನ್ನು ಗುರುತಿಸಲಾಗುವುದು. ಈ ರೀತಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಸ್ಟೆಪ್ ಯೋಜನೆಯಲ್ಲಿ ತರಬೇತಿ, ಅಂಚಿನ ಹಣ ನೀಡುವುದು, ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ನಡೆಸುವುದು ಮುಖ್ಯವಾದ ಅಂಶವಾಗಿರುತ್ತದೆ. ಸ್ಟೆಪ್ ಮಹಿಳಾ ಸಂಘಗಳಲ್ಲಿ ಹಾಲು ಶೇಖರಿಸಿ ಮಾರಾಟ ಮಾಡಲು ನಿರಂತರ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು, ಹೈನುಗಾರಿಕೆಗೆ ಪೂರಕವಾದ ತಾಂತ್ರಿಕ ಸೌಲಭ್ಯಗಳನ್ನು ನೀಡುವುದು, ಗ್ರಾಮ ಮಟ್ಟದಲ್ಲಿ ವಿವಿಧ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಹಾಗೂ ಗುಜರಾತ್ ರಾಜ್ಯದ ಆನಂದ್ ನಲ್ಲಿರುವ ಜಗತ್ ಪ್ರಸಿದ್ಧ “ಅಮೂಲ್ ಡೇರಿ”ಗೆ ಅದ್ಯಯನ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಹೈನುಗಾರಿಕೆಗೆ ಪೋತ್ಸಾಹಿಸುವುದು.

ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬದ ಇತರೇ ಸದಸ್ಯರ ಕಲ್ಯಾಣಕ್ಕಾಗಿ ಆರೋಗ್ಯ ಶಿಕ್ಷಣ ಮತ್ತು ಸುಚಿತ್ವ, ಸಮತೋಲನಾ ಪೌಷ್ಠಿಕ ಆಹಾರ ತಯಾರಿಕೆ, ತಾಯಿ ಮತ್ತು ಮಗುವಿನ ಆರೋಗ್ಯ ಪಾಲನೆ - ಪೋಷಣೆ, ಶುದ್ಧ ಕುಡಿಯುವ ನೀರು, ಲಸಿಕೆ/ಚುಚ್ಚು ಹಾಕಿಸುವುದು, ರೋಗ ನಿರೋಧಕ ಕ್ರಮಗಳ ಅನುಸರಿಸುವಿಕೆ, ಸ್ಥಳೀಯವಾಗಿ ಲಭ್ಯವಿರುವ ತರಕಾರಿಗಳ ಬಳಕೆ, ಮೂಢನಂಬಿಕೆ ಹಾಗೂ ಕಂದಾಚಾರಗಳ ಆಚರಣೆಯನ್ನು ತೊಲಗಿಸುವುದು ಮತ್ತು ಪೌಷ್ಠಿಕಾಂಶ ಕೊರತೆ ತಡೆಯುವಿಕೆ ಬಗ್ಗೆ ಯೋಜನೆವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.  ಆರೋಗ್ಯ ತಪಾಸಣೆ ಶಿಬಿರ, ನೇತ್ರ/ರಕ್ತ ಪರೀಕ್ಷೆ ಮತ್ತು ರಕ್ತದಾನ ಶಿಬಿರ ಏರ್ಪಡಿಸುವುದು ಹಾಗೂ ಸ್ಥಳೀಯವಾಗಿ ಲಭ್ಯವಿರುವ ತರಕಾರಿ, ಸೊಪ್ಪು ಇತರೇ ಆಹಾರ ಪದಾರ್ಥಗಳನ್ನು ಬಳಸಿ ತಾಯಿ ಮತ್ತು ಮಕ್ಕಳಿಗೆ ಸಮತೋಲನಾ ಆಹಾರ ತಯಾರಿಸುವ ವಿಧಾನಗಳ ಕುರಿತು ಪ್ರಾತ್ಯಕ್ಷಿತೆ ಕಾರ್ಯಕ್ರಮ ಕೈಗೊಳ್ಳಲಾಗುವುದು.  ಪ್ರತಿ ಸಂಘದಲ್ಲಿ 3 ದಿನಗಳ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ.  ಇದಕ್ಕೆ ರೂ.6,000/- ರಿಂದ ರೂ. 8,000/- ಅನುದಾನವನ್ನು ಯೋಜನೆಯಲ್ಲಿ ಒದಗಿಸಲಾಗಿದೆ.

ಗ್ರಾಮೀಣ ಭಾಗದ ಮಹಿಳೆಯರಿಗೆ ಕಾನೂನಿನ ಅರಿವು ಸಮರ್ಪಕವಾಗಿ ದೊರಕದೆ ಇರುವ ಕಾರಣ, ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ , ಆದ ಕಾರಣ ಕಾನೂನಿನ ಅರಿವು ಮೂಡಿಸುವುದು ಬಹಳ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಯೋಜನೆಯವತಿಯಿಂದ ಕಾನೂನು ಅರಿವು ನೀಡುವ ಕಾರ್ಯಕ್ರಮಗಳಲ್ಲಿ ಹಿರಿಯ ನ್ಯಾಯವಾದಿಗಳನ್ನು ವಿಶೇಷವಾಗಿ ಮಹಿಳಾ ನ್ಯಾಯವಾದಿಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಕರೆದೊಯ್ದು, ಮಹಿಳೆಯರಿಗೆ ಆಸ್ತಿ ಹಕ್ಕು, ವರದಕ್ಷಿಣೆ ನಿಷೇಧ, ಸಾಮಾಜಿಕವಾಗಿ, ಕೌಂಟುಬಿಕವಾಗಿ ಶೋಷಿಸಲ್ಪಡುವ ಮಹಿಳೆಯರಿಗೆ ಕಾನೂನು ನೆರವಿನ ಬಗ್ಗೆ ಅರಿವು ಮೂಡಿಸಲಾಗುವುದು.  ಅದೇ ಸಂದರ್ಭದಲ್ಲಿ ಅವರುಗಳಿಗೆ ನ್ಯಾಯಾಲಯಗಳು, ಆರಕ್ಷಕ ಠಾಣೆಗಳು, ತಹಸೀಲ್ದಾರ್ ಕಛೇರಿಗಳಿಗೆ ಮತ್ತು ಬ್ಯಾಂಕುಗಳಿಗೆ ಭೇಟಿ ಮಾಡಿಸುವ ಮೂಲಕ ಸದರಿ ಸಂಸ್ಥೆಗಳು/ಕಛೇರಿಗಳು ಕೆಲಸ ನಿರ್ವಹಿಸುವ ರೀತಿ ನೀತಿಗಳು, ಅವುಗಳಿಂದಾಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸಲಾಗುವುದು. ಪ್ರತಿ ಸಂಘದಲ್ಲಿ 3 ರಿಂದ 4 ದಿನಗಳ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ.

ಲಿಂಗಸೂಕ್ಷ್ಮತೆ ಬಗ್ಗೆ ಅರಿವು ಮೂಡಿಸುವುದು, ಗಂಡು ಮಕ್ಕಳಿಗೆ ಸಿಗುವ ಸರಿಸಮಾನ ವಿದ್ಯಾಭ್ಯಾಸವನ್ನು ಹೆಣ್ಣು ಮಕ್ಕಳಿಗೂ ಕೊಡಿಸುವುದು.  ವಿಧವೆಯರ ಪುನರ್ ವಿವಾಹಗಳ ಬಗ್ಗೆ ಅರಿವು ಮೂಡಿಸುವುದು, ಮಹಿಳೆಯರ ಶಿಕ್ಷಣದ ಬಗ್ಗೆ ಮನವರಿಕೆ ಮಾಡಿ, ಸರ್ಕಾರಿ ಸಂಸ್ಥೆಗಳು, ಬ್ಯಾಂಕುಗಳು/ಸ್ವಸಹಾಯ ಗುಂಪುಗಳು ಹಾಗೂ ಇತರೇ ಸಂಸ್ಥೆಗಳಿಂದ ಸಿಗುವ ಆರ್ಥಿಕ ಸೌಲಭ್ಯಗಳ ಬಗ್ಗೆ ಮಹಿಳೆಯರಿಗೆ ತಿಳುವಳಿಕೆ ನೀಡಲಾಗುವುದು.  ಇಂತಹ 3 ದಿನಗಳ ಶಿಬಿರಗಳನ್ನು ಏರ್ಪಡಿಸುವುದರೊಂದಿಗೆ ಒಂದು ದಿನದ ಪುರುಷ ಚೇತನ ಶಿಬಿರಗಳಲ್ಲಿ ಮಹಿಳೆಯರಿಗೆ, ಗಂಡಸರಿಗೆ, ಮಹಿಳೆಯರು ಅನುಭವಿಸುವಂತಹ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ.

“ನೋಡಿ ತಿಳಿ ಮಾಡಿ ಕಲಿ” ಎಂಬ ನಾಣ್ನುಡಿಯಂತೆ ಗುಜರಾತ್ ರಾಜ್ಯದ ಆನಂದ್‍ನ ಪ್ರಸಿದ್ದ “ಅಮೂಲ್ ಡೇರಿ” ಮತ್ತು ಇತರ ಸಂಘಗಳಿಗೆ, ಮಹಿಳಾ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಸದಸ್ಯೆಯರುಗಳನ್ನು  ಅಧ್ಯಯನ ಭೇಟಿ ಮಾಡಿಸಿ ಅದೇ ರೀತಿ ತಮ್ಮ ಸಂಘಗಳ ಬೆಳವಣಿಗೆಗೆ ಶ್ರಮಿಸುವಂತೆ ಪ್ರೇರೇಪಿಸಲು ಪ್ರವಾಸ ಏರ್ಪಡಿಸಲಾಗುತ್ತಿದೆ.

ಮಹಿಳಾ ಸಂಘಗಳ ಆದ್ಯತಾ ವಲಯದ ಸದಸ್ಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಲು ಹೈನುರಾಸು ಖರೀದಿಸಲು ತಲಾ ರೂ.5,000/- ಅಂಚಿನ ಹಣ ನೀಡಲಾಗಿದೆ. (ಈ ಮೊದಲು ರೂ.3000/- ನೀಡಲಾಗುತ್ತಿತ್ತು) ಹಣಕಾಸಿನ ನೆರವು ನೀಡುವ ಸಂಸ್ಥೆಗಳು ಫಲಾನುಭವಿಗಳಿಂದ ಕನಿಷ್ಠ ಶೇ. 20 ಅಂಚಿನ ಹಣ ಭರಿಸಬೇಕಾದರಿಂದ ಸಾಮಾನ್ಯವಾಗಿ ಫಲಾನುಭವಿಗಳು ಆರ್ಥಿಕವಾಗಿ ದುರ್ಬಲರಾಗಿದ್ದು ಅಂಚಿನ ಹಣ ಭರಿಸಲು ಕಷ್ಟಸಾಧ್ಯ ಕಾರಣ ತಲಾ ರೂ. 5,000/- ರಂತೆ 5ನೇ ಹಂತದಲ್ಲಿ ಪ್ರತಿ ಸ್ಟೆಪ್ ಸಂಘದ 15 ಮಹಿಳೆಯರಿಗೆ ರೂ. 75,000/- ಮತ್ತು 6ನೇ ಹಂತದಲ್ಲಿ 12 ಜನರಿಗೆ ರೂ.60,000/-, ಆವರ್ತನ ನಿಧಿಯಿಂದ ಬಡ್ಡಿರಹಿತ ಸಾಲ ನೀಡಲಾಗಿದೆ. ಇದನ್ನು ಉಳಿದ ಆದ್ಯತಾ ವಲಯದ ಸದಸ್ಯೆಯರಿಗೆ ಹೈನುರಾಸು ಖರೀದಿಸುವ ಸಲುವಾಗಿ ಸುತ್ತು ನಿಧಿಯಾಗಿ ಬಳಸಲಾಗುತ್ತಿದೆ.

7 ನೇ ಮತ್ತು 8 ನೇ ಹಂತದ ಆದ್ಯತಾ ವಲಯದ ಸದಸ್ಯೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹೈನುರಾಸು ಖರೀದಿಗಾಗಿ 10,000/-ಗಳಿಗೆ ಬಡ್ಡಿರಹಿತ ಸಾಲವನ್ನು ಅಂಚಿನ ಹಣದ ರೂಪದಲ್ಲಿ ನೀಡಲಾಗಿದೆ. ಇದುವರೆಗೆ 79,145 ಹೈನುರಾಸುಗಳನ್ನು ಆದ್ಯತಾ ಗುಂಪಿನ ಸದಸ್ಯರು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹಾಲಿನ ಬಟವಾಡೆ ಜೊತೆಗೆ ಸರ್ಕಾರದಿಂದ ದೊರೆಯುವ ಹಾಲು ಉತ್ಪಾದಕರ ಪ್ರೋತ್ಸಾಹ ಧನ ಪಡೆದು ಆರ್ಥಿಕವಾಗಿ ಸಬಲರಾಗಿರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರನ್ನು ಸೇರಿಸಿಕೊಂಡು ಸ್ವಸಹಾಯ ಗುಂಪುಗಳನ್ನು ರಚಿಸಲಾಗುವುದು ಹಾಗೂ ನಿಯಮಿತವಾಗಿ ಹಣದ ಉಳಿತಾಯ ಮಾಡಲಾಗುವುದು. ಯೋಜನೆಯ ಅನುಷ್ಠಾನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಸಹಭಾಗಿತ್ವವನ್ನು ಖಾತರಿ ಪಡಿಸಿಕೊಂಡು ನಿಯಮಿತ ಸಭೆಗಳನ್ನು ಮಾಡಿ ಹಣವನ್ನು ಮರುಪಾವತಿ ಮಾಡುತ್ತಾರೆ. ಸ್ವಸಹಾಯ ಗುಂಪುಗಳ ರಚನೆ, ನಿರ್ವಹಣೆ, ತರಬೇತಿಗಳಿಗೆ ವಿಶೇಷ ಮಹತ್ವ ನೀಡಿದ್ದು, ಇದರಿಂದ ಮಹಿಳೆಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಗೆ ಪ್ರೇರಣ ಶಕ್ತಿಯಾಗಿದೆ. 2,894 ಸಂಖ್ಯೆಯ ನಂದಿನಿ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು ಇವುಗಳ ಉಳಿತಾಯವು ರೂ.1791 ಲಕ್ಷಗಳಾಗಿದೆ. ಈ ಸ್ವಸಹಾಯ ಗುಂಪುಗಳು ಮಹಿಳೆಯರಿಗೆ ಆಶಾಕಿರಣವಾಗಿದೆ. 

ಭಾರತ ಸರ್ಕಾರದ ಸಹಾಯ ಮತ್ತು ಸಹಕಾರದೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿಯ ಸಕಾರಾತ್ಮಕ ಮಾರ್ಗದರ್ಶನದ ಮೂಲಕ ಗ್ರಾಮೀಣ ಮಹಿಳೆಯರು ತಮ್ಮ ದೈನಂದಿನ ಮನೆಗೆಲಸದೊಂದಿಗೆ, ಹೊಲ-ಗದ್ದೆಗಳಲ್ಲಿ ದುಡಿಯುವುದರ ಜೊತೆಗೆ ಸ್ಟೆಪ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಅಭ್ಯುದಯದ ಮುನ್ನಡೆಗೆ ದಾಪುಗಾಲು ಹಾಕುತ್ತಿರುವುದು ಈ ಕಾರ್ಯಚಟುವಟಿಕೆಗಳಿಂದ ಸಾಧ್ಯವೆನಿಸಿದೆ.

ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ತನ್ನ ಪ್ರಮುಖ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ವರ್ಣ ಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಆಜೀವಿಕಾ) ಯೋಜನೆ ಮೂಲಕ ಪುನರ್‍ರಚಿಸಿ 2010-11 ರಿಂದ ಜಾರಿಗೊಳಿಸಿದೆ. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆಎಸ್‍ಆರ್‍ಎಲ್‍ಪಿಎಸ್)ಯಿಂದ ರಾಜ್ಯ ಅಭಿಯಾನವನ್ನು “ಸಂಜೀವಿನಿ” ಎಂಬ ಹೆಸರಿನಲ್ಲಿ ಅನುಷ್ಠಾನಗೊಸಲಾಗುತ್ತಿದೆ.

ಭಾರತ ಸರ್ಕಾರದ ಸ್ಟೆಪ್ ಯೋಜನೆ ನಂತರ ಪ್ರಸ್ತುತ ರಾಜ್ಯ ಸರ್ಕಾರದ “ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ (ಕೆಎಸ್‍ಆರ್‍ಎಲ್‍ಪಿಎಸ್)” ಸಂಸ್ಧೆಯಿಂದ  ‘ಕ್ಷೀರ-ಸಂಜೀವಿನಿ’ -“ಹೈನುಗಾರಿಕೆ ಮೂಲಕ ಗ್ರಾಮೀಣ ಮಹಿಳೆಯರ ಸಾಮಾಜಿಕ – ಆರ್ಥಿಕ ಅಭಿವೃದ್ಧಿ” ಯೋಜನೆಯನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 250 ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಗಳಿಂದ ಒಟ್ಟು 10000 ಆದ್ಯತಾ ಗುಂಪಿನ ಸದಸ್ಯರನ್ನು ಗುರಿಯಾಗಿಸಿಕೊಂಡು 2014 ರಿಂದ ಜಾರಿಗೊಳಿಸಲಾಗಿದೆ. 3 ವರ್ಷಗಳ ಈ ಯೋಜನೆಗೆ ಒಟ್ಟು ಮೊತ್ತ ರೂ. 17.10 ಕೋಟಿಗಳನ್ನು ಮಂಜೂರಾಗಿದೆ. ಪ್ರತಿ ಫಲಾನುಭವಿಗೆ ರೂ.17,100/- “ಸಂಜೀವಿನಿ” ಕಾರ್ಯಕ್ರಮದ ಆಶಯದಂತೆ ದುರ್ಬಲ ವರ್ಗದ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯೆಯರು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ವಿಕಲಚೇತನರು, ಭೂರಹಿತರು, ವಿಧವೆಯರು, ವಲಸೆ ನಿರತ ಕೂಲಿ ಕಾರ್ಮಿಕರು ಹಾಗೂ ಇತರರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಪ್ರತಿ ಫಲಾನುಭವಿಗೆ ರೂ.17,000/- ಹಾಗೂ ಒಂದು ಮಹಿಳಾ ಸಂಘಕ್ಕೆ ರೂ.4.55 ಲಕ್ಷ ಅನುದಾನ ನೀಡಲಾಗಿದೆ.

ಕ್ಷೀರ ಸಂಜೀವಿನಿ ಯೋಜನೆಯಲ್ಲಿ 2014-15 ಮತ್ತು 2015-16ನೇ ಸಾಲಿನಲ್ಲಿ ರೂ.7.27 ಕೋಟಿ ಹಣ ಬಿಡುಗಡೆಯಾಗಿದ್ದು, 72 ಮತ್ತು 108 ಸಂಘಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಪ್ರತಿ ಸಂಘದ 12 ಆದ್ಯತಾ ಗುಂಪಿನ ಮಹಿಳೆಯರಿಗೆ ಅಂಚಿನ ಹಣ ರೂ. 1,20,000/- ಗಳನ್ನು ಆವರ್ತನ (ಸುತ್ತು) ನಿಧಿಯಿಂದ ಬಡ್ಡಿ ರಹಿತ ಸಾಲ ನೀಡಲಾಗಿದೆ ಈ ಸದ್ಯಸರುಗಳಿಗೆ. ತರಬೇತಿ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ನಡೆಸಲಾಗಿದೆ, ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳು ಮಹಿಳಾ ಸಬಲೀಕರಣಕ್ಕೆ ದಾರಿಯಾಗಿದೆ.  

ಕ್ಷೀರ ಸಂಜೀವಿನಿ ಯೋಜನೆಯನ್ನು 2016-17ನೇ ಸಾಲಿನಲ್ಲಿ 70 ಮಹಿಳಾ ಸಂಘಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

¨ಭಾರತ ಸರ್ಕಾರದ ಸ್ಟೆಪ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಕ್ಷೀರ ಸಂಜೀವಿನಿ ಯೋಜನೆಯಲ್ಲಿ  ಬಡತನ ರೇಖೆಗಿಂತ ಕೆಳಗಿರುವ (BPL) ಫಲಾನುಭವಿಗಳು ಸಾಮಾಜಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ಮನಗೊಂಡು ಸ್ಟೆಪ್ ಮತ್ತು ಕ್ಷೀರ ಸಂಜೀವಿನಿ ಮಾದರಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು ಸಹ ವ್ಯಾಪ್ತಿಯ ಎಲ್ಲಾ 14 ಹಾಲು ಒಕ್ಕೂಟಗಳ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ದುರ್ಬಲ ವರ್ಗದ ಹಾಗೂ ಬಡತನರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೈನುಗಾರಿಕೆ ಉದ್ಯೋಗ ಕಲ್ಪಿಸುವುದರ ಮೂಲಕ ಆದ್ಯತಾ ಗುಂಪಿನ ಸದಸ್ಯೆಯರ ತಲಾ ಆದಾಯವನ್ನು ಹೆಚ್ಚಿಸುವಲ್ಲಿ, ಆರ್ಥಿಕ ಮತ್ತು ಸಾಮಾಜಿಕ ಅಸಮತೋಲನ ಹೋಗಲಾಡಿಸುವುವಲ್ಲಿ ಅದ್ಭುತ ಯಶಸ್ಸು ಕಂಡು ಪ್ರೇರಣೆ ಹೊಂದಿದ್ದು, 2016-17ನೇ ಸಾಲಿನಲ್ಲಿ ಕಹಾಮ ಅನುದಾನದ ಮೂಲಕ “ಕಹಾಮ ಸಂಜೀವಿನಿ” ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ವಯ 100 ಮಹಿಳಾ ಸಂಘಗಳಲ್ಲಿನ 4000 ಆದ್ಯತಾ ಗುಂಪಿನ ಸದಸ್ಯೆಯರಿಗೆ ತರಬೇತಿ,AMCU, ಸೋಲಾರ್ ಪ್ಯಾಕ್, ಆದ್ಯತಾ ಗುಂಪಿನ ಸದಸ್ಯೆಯರಿಗೆ ಅಂಚಿನ ಹಣ/ಬ್ಯಾಂಕ್ ಲಿಂಕೇಜ್‍ಗಳ ಮೂಲಕ ಹೈನುರಾಸುಗಳನ್ನು ಕೊಡಿಸುವುದು, ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೀಡುವುದು ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರೂ. 4.25 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

2017-18ನೇ ಸಾಲಿನಲ್ಲಿ "ಕಹಾಮ ಸಂಜೀವಿನಿ"  ಈ ಯೋಜನೆಯನ್ನು ಕಹಾಮ ಅನುದಾನದಲ್ಲಿ 100 ಮಹಿಳಾ ಸಂಘಗಳು ಮುಂದುವರಿಸಿ ರೂ. 606 ಲಕ್ಷಗಳ ಅನುದಾನ ಮಂಜೂರು ಮಾಡಲಾಗಿದೆ.

ಇವುಗಳ ಜೊತೆಗೆ ಗ್ರಾಮೀಣ ಮಟ್ಟದ ಹಾಲು ಉತ್ಪಾದಕರ ಮಹಿಳಾ ಸಂಘಗಳಲ್ಲಿ ಉತ್ಪಾದಕರು ಪೂರೈಸುವ ಹಾಲನ್ನು ನಿಖರವಾಗಿ ಅಳೆಯಲು, ಜಿಡ್ಡಿನಾಂಶ ಮತ್ತು ಘನಾಂಶವನ್ನು  ಪರಿಶೀಲಿಸಿ, ನಿಖರ ದರವನ್ನು ಕಂಪ್ಯೂಟರ್ ಬಿಲ್ ಮೂಲಕ ಪಾವತಿಸಲು ಹಾಗೂ ಸಂಘದ ದಿನ ನಿತ್ಯದ ವ್ಯವಹಾರಗಳನ್ನು ಕಂಪ್ಯೂಟರೀಕೃತಗೊಳಿಸಲು ಒಟ್ಟಾರೆಯಾಗಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಮೂಡಿಸಲು “ಸ್ವಯಂ ಚಾಲಿತ ಹಾಲು ಶೇಖರಣಾ ಯಂತ್ರ” (AMCU)ಗಳನ್ನು ರಾಜ್ಯದ 14 ಹಾಲು ಒಕ್ಕೂಟಗಳ 100 ಅರ್ಹ ಮಹಿಳಾ ಸಂಘಗಳಿಗೆ AMCU ಒದಗಿಸಲು ಪ್ರತಿ AMCUಗೆ ರೂ.75,000/-ಗಳಂತೆ ಈ ವರ್ಷಕ್ಕೆ ರೂ. 73.5 ಲಕ್ಷ, ಉತ್ತರ ಕರ್ನಾಟಕದ ಹಾಲು ಒಕ್ಕೂಟಗಳಿಗೆ (ಶಿವಮೊಗ್ಗ ಸೇರಿ) ಹೊಸ ಮಹಿಳಾ ಸಂಘಗಳನ್ನು ಸ್ಥಾಪಿಸಲು ಸಂಘಗಳಿಗೆ ತಲಾ ರೂ.50,000/-ದಂತೆ ಪ್ರಾರಂಭಿಕ ಅನುದಾನ ಒಟ್ಟು ರೂ.2 ಕೋಟಿ ಮಂಜೂರು ಮಾಡಲಾಗಿದೆ.  

2017-18ನೇ ಸಾಲಿನ ಕಹಾಮ-ಸಂಜೀವಿನಿ ಯೋಜನೆಯಡಿಯಲ್ಲಿ ಬರುವ ಆದ್ಯತಾ ಗುಂಪಿನ ಸದಸ್ಯೆಯರುಗಳಿಗೆ ಹೆಚ್ಚುವರಿ 4 ಸೌಲಭ್ಯಗಳನ್ನು ಒದಗಿಸಲಾಗಿದೆ.

1. ಪ್ರಸ್ತುತ ಈಗಾಗಲೇ ಸದಸ್ಯರು ಹೊಂದಿರುವ ಹೈನುರಾಸುಗಳಿಗೆ ವಿಮೆ ಸೌಲಭ್ಯ ಒದಗಿಸುವುದು.
2. ಜನಶ್ರೀ ಭೀಮಾ ಯೋಜನೆ.
3. ಯಶಸ್ವನಿ ವಿಮೆ ಯೋಜನೆ.
4. Medicliam ಸೌಲಭ್ಯವನ್ನು ಆದ್ಯತಾ ಗುಂಪಿನ ಸದಸ್ಯೆಯರುಗಳಿಗೆ ಮತ್ತು ಅವರ ಕುಟುಂಬಕ್ಕೆ ಒದಗಿಸುವುದು.

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105